• ವಿಧ್ಯಾರ್ಥಿಗಳು ಸಾಮಾಜಮುಖಿಯಾಗಿ ರೂಪುಗೊಳ್ಳಬೇಕು : ಸಂತೋಷ್ ಕಾಚೀನಕಟ್ಟೆ

    • December 30, 2023
    • Posted By : Kapmi Library
    • 0 Comment

    ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಕಾಲೇಜಿನ ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭವು ಇಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮಲ್ಲಿಗೆ ಹಳ್ಳಿಯ ಆವರಣದಲ್ಲಿ ನಡೆಯಿತು.

    ಶಿವಮೊಗ್ಗದ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರರಾದ ಸಂತೋಷ್ ಕಾಚೀನಕಟ್ಟೆ ಅವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

    ತಾವು ವಿದ್ಯಾರ್ಥಿಯಾಗಿದ್ದಾಗ ವಿವಿಧ ಸಂಘಗಳ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ತಮ್ಮ ಜೀವನ ರೂಪಿಸಿಕೊಳ್ಳಲು ಹೇಗೆ ಸಹಕಾರಿಯಾಯಿತು ಎಂಬ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗಲೇ ಜೀವನಾನುಭವ ಪಡೆಯಲು ಸಾಧ್ಯ. ಸಾಮಾಜಿಕ ಚಟುವಟಿಕೆಗಳಿಂದ ನಾಯಕತ್ವ ಗುಣ, ಸಮಸ್ಯೆಗಳನ್ನು ಎದುರಿಸಲು ಬೇಕಾದ ಧೈರ್ಯ ದೊರಕುತ್ತದೆ. ವಿದ್ಯಾರ್ಥಿಗಳು ಸಾಮಾಜಮುಖಿಯಾಗಿ ರೂಪುಗೊಳ್ಳಬೇಕು ಎಂದರು.

    ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಲಾಗುತ್ತದೆ.ವಿದ್ಯಾರ್ಥಿಗಳ ಬದುಕಿನಲ್ಲಿ ಕಾಲೇಜು ಜೀವನ ಅತ್ಯಂತ ಮಹತ್ವದ ಘಟ್ಟ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದರು.

    ತಮ್ಮ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು ವಿಧ್ಯಾರ್ಥಿಗಳಿಗೆ ಈ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ದಿಸೆಯಲ್ಲಿ ಕ್ರಿಯಾಶೀಲರಾಗಬೇಕು. ಓದಿಗೆ ಹೆಚ್ಚಿನ ಮಹತ್ವವನ್ನ ನೀಡಬೇಕು ಎಂದರು.

    ಮುಖ್ಯ ಅತಿಥಿಗಳಾದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿಯಾದ ಡಾ. ನಾಗರಾಜ್ ಪರಿಸರ ಅವರು ಮಾತನಾಡಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ತನ್ನದೇ ಛಾಪನ್ನು ಮೂಡಿಸಿದೆ. ಮೌಲ್ಯಾಧಾರಿತ ಶಿಕ್ಷಣವನ್ನು ಕಾಲೇಜು ನೀಡುತ್ತಿದೆ ಎಂದು ಕಾಲೇಜು ಆಡಳಿತವನ್ನು ಪ್ರಶಂಸಿಸಿದರು.

    ವಿದ್ಯಾರ್ಥಿಗಳು ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಎನ್ಎಸ್ಎಸ್ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಂಯಮವನ್ನು ಕಲಿಯಬಹುದು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಹೊಂದಾಣಿಕೆ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು, ಪರಿಸರಪ್ರೇಮಿಗಳಾಗುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಿಳಿಸಿದರು.

    ಕಾಲೇಜಿನ ಎಂ ಸಿ ಸಿ ಎಸ್ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಇಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ. ಅವರ ಬದುಕಿನ ನಿದರ್ಶನಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ. ಅವುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೈಚಾರಿಕ ಮನೋಭಾವವನ್ನು ರೂಡಿಸಿಕೊಳ್ಳುವ ಮೂಲಕ ನಿರಂಕುಶಮತಿಗಳಾಗಬೇಕು ಎಂದರು.

    ಸಂವಿಧಾನ ಎಲ್ಲದಕ್ಕೂ ಮೀರಿದ ಗ್ರಂಥವಾಗಿದ್ದು, ಅದರಲ್ಲಿರುವ ಅಂಶಗಳನ್ನು ಎಲ್ಲರೂ ಪಾಲಿಸಬೇಕು. ಸಂವಿಧಾನವನ್ನು ಗೌರವಿಸಬೇಕು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಹಿರಿಯ ವಿದ್ಯಾರ್ಥಿಗಳ ಹೆಜ್ಜೆ ಗುರುತುಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳು ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣವನ್ನ ಅರಸಿ ಬಂದಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂತೋಷ್ ಕಾಚಿನಕಟ್ಟೆ ಅವರ ಜೀವನ ಸ್ಪೂರ್ತಿಯಾಗಿದೆ ಎಂದರು.

    ಕುವೆಂಪು ಅವರ ಸವಿನೆನಪಿಗಾಗಿ ಕಾಲೇಜು ವಿದ್ಯಾರ್ಥಿಗಳೇ ಅಭಿನಯಿಸಿದ
    ಕಾಲೇಜಿನ ಉಪನ್ಯಾಸಕರಾದ ಮಂಜುನಾಥ ಸ್ವಾಮಿ ಹಾಗೂ ಹನಿ ಕುರುವರಿ ಅವರು ನಿರ್ದೇಶಿಸಿದ ‘ ಇಲ್ಲಿ ಯಾರು ಅಮುಖ್ಯರಲ್ಲ” ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.

    ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿಯವರು ಸ್ವಾಗತಿಸಿದರು. ವಿದ್ಯಾರ್ಥಿನಿ ತನ್ಮಯಿಯವರು ಸ್ವಾಗತ ನೃತ್ಯ ಪ್ರದರ್ಶಿಸಿದರು. ತೃತೀಯ ವರ್ಷದ ವಿದ್ಯಾರ್ಥಿಗಳಾದ ಭಾರ್ಗವಿ ಮತ್ತು ತಂಡದವರು ಪ್ರಾರ್ಥಿಸಿದರು. ತೃತೀಯ ವರ್ಷದ ಬಿಎ ವಿದ್ಯಾರ್ಥಿನಿ ಖುಷಿ ನಿರೂಪಿಸಿದರು. ವಿದ್ಯಾರ್ಥಿನಿ ಪ್ರೀತಿ ಅತಿಥಿಗಳ ಪರಿಚಯ ಮಾಡಿದರು.
    ಉಪನ್ಯಾಸಕರಾದ ಡಾ. ಸುಕೀರ್ತಿಯವರು ವಂದಿಸಿದರು.
    ವಿದ್ಯಾರ್ಥಿಗಳಿಂದ ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುಕೀರ್ತಿ, ಶ್ರೀ ರಾಯಪ್ಪ, ಯುವರ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಮಂಜುನಾಥ ಸ್ವಾಮಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಸಿಬ್ಬಂದಿಗಳು ಭಾಗಿಯಾಗಿದ್ದರು.

     

No comments found

LEAVE COMMENT

Your email address will not be published. Required fields are marked *

Teaching Positions are Open for for M Phil Clinical Psychology  Apply Now 

M Phil applications are open for the academic year 2024 - 25    Apply Now

Last date to reach the M Phil application to the college office on or before 30 September 2024.

Online Registration
close slider