ದಿನಾಂಕ 28/09/2024 ರಂದು ಶಿವಮೊಗ್ಗದ ಮಾನಸ ಟ್ರಸ್ಟ್‍ನ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಸ್ನಾತಕೋತ್ತರ ಶೈಕ್ಷಣಿಕ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಾಗಿ ಪ್ರಶಸ್ತಿ ಪ್ರಧಾನ ಮಾಡುವ ಶಿಕ್ಷಣೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಿದ ಕುವೆಂಪು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿಯವರು ಪ್ರಧಾನ ಭಾಷಣದಲ್ಲಿ ಮನೋವಿಜ್ಞಾನದ ವಿಕಾಸದ ಹಲವು ಮಜಲುಗಳನ್ನೂ ಅದರ ಆಯಾಮಗಳನ್ನೂ ವಿವರಿಸಿದರು. ವಿವಿಧ ಸಿದ್ಧಾಂತಗಳೂ, ಜ್ಞಾನಿಗಳು ಈ ವಿಜ್ಞಾನದ ಬೆಳವಣಿಗೆಗೆ ನೀಡಿದ ತಾತ್ವಿಕ ಅಂಶಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದು.
ಆಧುನಿಕ ಯುಗದಲ್ಲಿ ಮನೋವಿಜ್ಞಾನ ಹಾಗೂ ತತ್ವಶಾಸ್ತ್ರಗಳ ಪರಸ್ಪರ ಪೂರಕವಾದ ಅಧ್ಯಯನ ಅಗತ್ಯವಿದೆ ಎಂದು ತಿಳಿಸಿದರು. ಇಂದಿನ ಮಾನಸಿಕ ಸಮಸ್ಯೆಗಳು ವ್ಯಕ್ತಿಗತವಲ್ಲ. ಅವು ಸಮಾಜದಲ್ಲಿ ಇದೆ ಎಂದು ತೀಕ್ಷ್ಣವಾಗಿ ಹೇಳಿದ ಅವರು ಆಧುನಿಕ ಸಮಾಜದ ಆಗುಹೋಗುಗಳು, ತಲ್ಲಣಗಳು ವ್ಯಕ್ತಿಯ ಭಾವನಾತ್ಮಕ ಸೂಕ್ಷ್ಮತೆಯನ್ನು ಕ್ಷೀಣಿಸುವಂತೆ ಮಾಡಿದೆ ಎಂದು ವಿಷಾದಿಸಿದರು. ಮನೋವಿಜ್ಞಾನದ ವಿದ್ಯಾರ್ಥಿಗಳು ಸಂಕೀರ್ಣ ಮನಸ್ಸಿನ ವಿಚಾರಗಳನ್ನು ಶ್ರದ್ಧೆಯಿಂದ ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ವಿ ಶಾನ್‍ಭಾಗ್, ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜನ್ನು 2017 ರಲ್ಲಿ ಪ್ರಾರಂಭಿಸುವ ಮೂಲಕ ಸಂಕೀರ್ಣವಾದ ಮನೋವಿಜ್ಞಾನದ ವಿಷಯಕ್ಕೆ ಸಂಬಂಧಿಸಿದ ವಿವಿಧ ವಿಜ್ಞಾನಗಳ ಕುರಿತು ಅಧ್ಯಯನಗಳನ್ನು ನಡೆಸಲು ಸಾಧ್ಯವಾಗಿದೆ ಎಂದರು. ಎಲ್ಲರನ್ನೂ ಸ್ವಾಗತಿಸಿದ ಅವರು ಕಾಲೇಜಿನಲ್ಲಿ ಪಠ್ಯ ಮಾತ್ರವಲ್ಲದೆ ಹಲವಾರು ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳು, ತರಬೇತಿಗಳು ಹಾಗೂ ಸಂಶೋಧನೆಗಳು ನಡೆಯುತ್ತಿವೆ ಎಂದರು. ಈ ಸಮಾರಂಭದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ಮನ:ಶಾಸ್ತ್ರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಾನಸ ಟ್ರಸ್ಟ್‍ನ ನಿರ್ದೇಶಕರಾದ ಡಾ.ರಜನಿ ಎ ಪೈ, ಡಾ.ರಾಜೇಂದ್ರ ಚೆನ್ನಿ, ಸಿಸ್ಟರ್ ಮಾರಿ ಇವ್ಲಿನ್, ಡಾ. ಪ್ರೀತಿ ವಿ. ಶಾನಭಾಗ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ ಭಟ್, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕರಾದ ಮಂಜುನಾಥ ನಿರೂಪಿಸಿ, ಕು. ಹನಿ ಕುರುವರಿ ವರದಿ ಮಂಡಿಸಿ, ಕು. ಶಿಲ್ಪಾರವರು ಪ್ರಶಸ್ತಿ ಪತ್ರ ವಿತರಣೆಯನ್ನು ನಿರ್ವಹಿಸಿದರು. ಡಾ.ಅರ್ಚನಾಭಟ್ ಎಲ್ಲರನ್ನೂ ವಂದಿಸಿದರು. ಡಾ. ಸಂಧ್ಯಾಕಾವೇರಿ ಕೆ. , ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು.
Teaching Positions are Open for for M Phil Clinical Psychology Apply Now