• ನಶೆಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳೇ ಬದಲಾವಣೆಯ ಹರಿಕಾರರಾಗಬೇಕಾಗಿದೆ: ನ್ಯಾಯಮೂರ್ತಿ ಶ್ರೀ ಸಂತೋಷ್.ಎಂ.ಎಸ್

    • June 27, 2024
    • Posted By : Kapmi Library
    • 0 Comment

     

    ಶಿವಮೊಗ್ಗ : ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸುರಭಿ ಮಹಿಳಾ ಮಂಡಳಿ ಹಾಗೂ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಹಾಗೂ ಸಾಗಣೆ ವಿರೋಧಿ ದಿನದ ಪ್ರಯುಕ್ತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಶ್ರೀ ಸಂತೋಷ್.ಎಂ.ಎಸ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. “ಇಂದು ಜಗತ್ತಿನಾದ್ಯಂತ ಮಾದಕ ವಸ್ತು ವ್ಯಸನವು ಪಿಡುಗಾಗಿ ಯುವ ಜನರನ್ನು ಕಾಡುತ್ತಿದೆ, ಇದನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಬದಲಾವಣೆಯ ಹರಿಕಾರರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಾವುದೇ ಮಾದಕ ವಸ್ತುಗಳಿಂದ ದೂರವಿರುವುದಲ್ಲದೇ ತಮ್ಮ ಸಮವಯಸ್ಕರನ್ನು ವ್ಯಸನ ಮುಕ್ತವಾಗಿಡಲು ಪ್ರೇರೇಪಿಸಬೇಕು” ಎಂದು ತಿಳಿಸಿದರು. ಇದರೊಂದಿಗೆ “ಯಾವುದೇ ಚಟವಿರುವ ವ್ಯಕ್ತಿ ಇನ್ನೊಬ್ಬರು ಅದನ್ನೇ ಪಾಲಿಸುವಂತೆ ಒತ್ತಡ ಹೇರಬಾರದು” ಎಂದು ತಿಳಿಸಿದರು.

    ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀ ಜಿ.ಕೆ.ಮಿಥುನ್ ಕುಮಾರ್ ರವರು ವಿದ್ಯಾರ್ಥಿಗಳಿಗೆ “ಎಲ್ಲಿಯೇ ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಣೆ, ಬಳಕೆಯು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಲೇಬೇಕು” ಎಂದು ಸೂಚಿಸಿದರು. “ಕೇವಲ 20 ದಿನಗಳಲ್ಲಿ 61 ಕಡೆಗಳಲ್ಲಿ ಅಕ್ರಮ ಮಾದಕ ವಸ್ತುಗಳು ಜಿಲ್ಲೆಯಾದ್ಯಂತ ಪತ್ತೆಯಾಗಿದೆ” ಎಂದು ತಿಳಿಸಿದರು.

    ದಿಕ್ಸೂಚಿ ಭಾಷಣವನ್ನು ಮಾಡಿದ ಮಾನಸ ಸಂಸ್ಥೆಯ ಡಾ.ರಾಜೇಂದ್ರ ಚೆನ್ನಿಯವರು “ಮಾದಕ ವಸ್ತು ಬಳಕೆ ಮತ್ತು ಮಾರಾಟವನ್ನು ತಡೆಗಟ್ಟುವುದು ಹಾಗೂ ವ್ಯಸನಿಗಳನ್ನು ಅವರ ಕುಟುಂಬದವರನ್ನು ಕಳಂಕ ರಹಿತವಾಗಿ ಮುಖ್ಯ ವಾಹಿನಿಯಲ್ಲಿರುವಂತೆ ಪರಿವರ್ತಿಸುವುದು ಮಹತ್ವದ ಜವಾಬ್ದಾರಿ” ಎಂದು ತಿಳಿಸಿದರು. ಅವರು ಈ ವರ್ಷದ ಘೋಷವಾಕ್ಯ “ಸ್ಪಷ್ಟ ಸಾಕ್ಷಿಯಿದೆ: ತಡೆಗಟ್ಟುವುದಕ್ಕಾಗಿ ಹೂಡಿಕೆಯನ್ನು ಮಾಡೋಣ” ಎಂಬುದನ್ನು ವಿಶ್ಲೇಷಿಸಿದರು.

    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೃಷ್ಣಪ್ಪ, ವಿಕಲಚೇತನರ ಸಬಲೀಕರಣ ಇಲಾಖೆಯ ಶ್ರೀಮತಿ ಶಶಿರೇಖಾ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ.ಎ.ಪೈ, ಸುರಭಿ ಮಹಿಳಾ ಮಂಡಳಿಯ ಯೋಜನಾ ನಿರ್ದೇಶಕರಾದ ಶ್ರೀಮತಿ ಲತಾ ಮತ್ತು ಶ್ರೀಮತಿ ರೇಖಾ, ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ಕಾರ್ಯಾಗಾರದಲ್ಲಿ ಸುರಭಿ ವ್ಯಸನ ಮುಕ್ತ ಕೇಂದ್ರದಿಂದ ವ್ಯಸನಮುಕ್ತರಾಗಿ ಈಗ ಸಮಾಜದಲ್ಲಿ ಹಲವರನ್ನು ವ್ಯಸನ ಮುಕ್ತರಾಗಿಸಲು ಸ್ವಯಂಸೇವೆಯನ್ನು ನೀಡುತ್ತಿರುವ ಶ್ರೀ ಮಂಜುನಾಥ್, ಸತೀಶ್, ದೇವುರವರನ್ನು ಸನ್ಮಾನಿಸಲಾಯಿತು. ಅವರು ಅವರ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಕು.ವಿದ್ಯಾ ನಿರೂಪಿಸಿದರು, ಕಾಲೇಜಿನ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶ್ರೀಮತಿ ರೇಖಾ ಸ್ವಾಗತಿಸಿ, ಶ್ರೀಮತಿ ಲತಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀ ಮಂಜುನಾಥ ಸ್ವಾಮಿ ವಂದಿಸಿದರು.

No comments found

LEAVE COMMENT

Your email address will not be published. Required fields are marked *

Teaching Positions are Open for for M Phil Clinical Psychology  Apply Now 

M Phil applications are open for the academic year 2024 - 25    Apply Now

Last date to reach the M Phil application to the college office on or before 30 September 2024.

Online Registration
close slider