ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಜಯ ಸಾಧಿಸಿ ಇಪ್ಪತ್ತೈದು ವರುಷಗಳು ಸಂದ ನೆನಪಿಗಾಗಿ ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ ವತಿಯಿಂದ ನಗರದ ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿನ -ರಜತ ಜಯಂತಿ’ ವಿಷಯದ ಕುರಿತು ವಿಶೇಷ ಛಾಯಾಚಿತ್ರ ಪ್ರದರ್ಶನ ಹಮ್ಮಿಕ್ಕೊಳ್ಳಲಾಗಿದೆ. ಪ್ರದರ್ಶನವನ್ನು ಇಂದು ಭಾರತೀಯ ಸೇನೆಯ ನಿವೃತ್ತ ಯೋಧ ಶ್ರೀ. ರಾಜಶೇಖರ್. ಜೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರು ನಮ್ಮ ದೇಶದ ಹೆಮ್ಮೆಯಾಗಿದ್ದಾರೆ. ದೇಶ ರಕ್ಷಣೆಗಾಗಿ ರಾತ್ರಿ-ಹಗಲು ಕರ್ತವ್ಯ ನಿರ್ವಹಿಸುವ ಅವರ ಮನೋಸ್ಥೈರ್ಯ ನಮ್ಮಗೆಲ್ಲಾ ಮಾದರಿಯಾಗಬೇಕು. ಇಂದಿನ ಯುವ ಜನಾಂಗ ದೇಶ ರಕ್ಷಣೆಯ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಗಡಿಯಲ್ಲಿ ಸೇನಾಕಾರ್ಯ ನಿರ್ವಹಿಸುವ ಸೈನಿಕರ ಶೌರ್ಯವನ್ನು ಸ್ಮರಿಸಲು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಅಲ್ಲದೆ, ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲು ಇದೊಂದು ಅವಕಾಶ ಎಂದು ಶ್ರೀ. ರಾಜಶೇಖರ್ ಹೇಳಿದರು.
ಮಾನಸ ಟ್ರಸ್ಟ್ ನ ನಿರ್ದೇಶಕಿ, ಡಾ. ರಜನಿ. ಎ. ಪೈ, ಲೇಖಕರಾದ ಡಾ. ರಾಜೇಂದ್ರ ಚೆನ್ನಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ. ಕೆ, ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶ್ರೀಮತಿ. ಅಕ್ಷತಾ ಸಿ. ಹೆಚ್ , ಇಲಾಖೆಯ ಶ್ರೀ. ಲಕ್ಷ್ಮೀಕಾಂತ್ ಸಿ.ವಿ ಮತ್ತಿತರರು ಉಪಸ್ಥಿತರಿದ್ದರು.
ಛಾಯಾಚಿತ್ರ ಪ್ರದರ್ಶನವು ಕಾರ್ಗಿಲ್ ವಿಜಯ ದಿವಸ ಹಾಗೂ ನೂತನ ಕ್ರಿಮಿನಲ್ ಕಾನೂನುಗಳ ಕುರಿತ ಮಾಹಿತಿ ಫಲಕಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಜುಲೈ 30 ರವರೆಗೆ ಕಾಲೇಜು ಆವರಣದಲ್ಲಿ ಉಚಿತವಾಗಿ ತೆರೆದಿರುತ್ತದೆ.